
ಸಕಲೇಶಪುರ: ಸಕಲೇಶಪುರ ಸ್ವಾಮಿ ರಥೋತ್ಸವದ ಅಂಗವಾಗಿ ನಡೆದ 67 ನೇ ಜಾತ್ರಾ ಮಹೋತ್ಸವದಲ್ಲಿ ಭಾರಿ ಅಕ್ರಮ ನಡೆದಿದ್ದು ಕಲಾವಿದರಿಗೆ ಸರಿಯಾದ ಸಂಭಾವನೆ ನೀಡದೆ ಅಸಭ್ಯವಾಗಿ, ಅಗೌರವದಿಂದ ನಡೆದುಕೊಂಡು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಕಲಾವಿದ ಸಂಘದ ಅಧ್ಯಕ್ಷ ಎ.ಎಚ್. ರಮೇಶ್ ಆರೋಪಿಸಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಾತ್ರೆ ಎಂಬುದು ಕಲಾವಿದರಿಗೆ ಮೋಸ ಮಾಡಿ, ಲಕ್ಷಾಂತರ ರೂಪಾಯಿ ದೋಚುವ ಒಂದು ದಂದೆ ಆಗಿದೆ ಎಂದು ಆರೋಪಿಸಿದರು.
ಜಾತ್ರೆ 15 ದಿನ ನಡೆಯಿತು ಇದರಲ್ಲಿ ಕೆಲವು ದಿನ ಮಾತ್ರ ಕೆಲವು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಹಳಷ್ಟು ದಿನ ಕಾರ್ಯಕ್ರಮ ನಡೆದಿಲ್ಲ ಹೀಗಿದ್ದರೂ ಸಹ ಇವರು ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ ಎಂದು ಬಿಲ್ಲು ಮಾಡಿಕೊಂಡಿದ್ದಾರೆ ಎಂದರು.
ಫೆಬ್ರವರಿ 12 ರಂದು ಜಾತ್ರೆ ಉದ್ಘಾಟನೆ ಅಯಿತು. ಆ ದಿನಸ ಕಾರ್ಯಕ್ರಮ ನಡೆಯಲಿಲ್ಲ. 13 ರಂದು ಹಾನುಬಾಳ್ ಮೆಲೋಡಿಸ್ ಕಲಾತಂಡದಿಂದ ಕಾರ್ಯಕ್ರಮ ವಿತ್ತು. ಇವರಿಗೆ ₹ 25000 ಗೌರವದನ ನೀಡಲಾಗಿದೆ. ಸೌಂಡ್ ಸಿಸ್ಟಮ್ ಬಹಳ ಕಳಪೆಯಾಗಿತ್ತು ಕಲಾವಿದರು ಬಹಳ ಸಂಕಷ್ಟ ಪಟ್ಟರು. 14 ರಂದು ಬೆಂಗಳೂರು ಹಾಸ್ಯ ಕಾರ್ಯಕ್ರಮ. ಇವರಿಗೆ ₹ 25000 ನೀಡಲಾಗಿದೆ.15 ರಂದು ಕಾರ್ಯಕ್ರಮ ನಡೆದಿಲ್ಲ.16 ರಂದು ಮೂಹನ್ ಮೆಲೋಡಿಸ್ ಕಾರ್ಯಕ್ರಮ ₹ 25೦೦೦ ಸಾವಿರಕ್ಕೆ ನಡೆಸಿದರು. 17 ರಂದು ಮುರಳಿ ಸ್ವರ ಸಾಗರ ಇವರಿಗೆ ಸಂಭಾವನೆ₹ 10 ಸಾವಿರ. 18 ರಂದು ಸ್ಥಳೀಯ ಕಲಾವಿದರಿಂದ ಉಚಿತ ಕಾರ್ಯಕ್ರಮ. 19 ಕಾರ್ಯಕ್ರಮ ನಡೆದಿಲ್ಲ. 20 ರಂದು ಮೈಸೂರು ಐಗಿರಿ ಸುಗಮ ತಂಡದಿಂದ ಕಾರ್ಯಕ್ರಮ ನಡೆಯಿತು. 20,000 ಸಂಭಾವನೆ ನೀಡಲಾಯಿತು. 21, 22ಹಾಗೂ 23 ಕಾರ್ಯಕ್ರಮ ನಡೆದಿಲ್ಲ. 24 ರಂದು ಜೂನಿಯರ್ ಅಪ್ಪು ರವರಿಂದ ಕಾರ್ಯಕ್ರಮ ನಡೆಸಲಾಯಿತು ಆದರೆ ಅವರಿಗೆ 20 ಸಾವಿರ ಸಂಭಾವನೆ ನೀಡಲಾಗಿದೆ. ಉಳಿಕೆ ಹಣ ನೀಡಿಲ್ಲ. 25 ರಂದು ಸ್ಟಾರ್ ಮೆಲೋಡಿಸ್ ಕಾರ್ಯಕ್ರಮ 20 ಸಾವಿರ ನೀಡಲಾಗಿದೆ ಉಳಿಕೆ ಹಣ ನೀಡಿಲ್ಲ.
ಈ ದಿನ 9000 ಹೆಚ್ಚುವರಿ ನೀಡಿ ಜನರೇಟರ್ ತಂದು ಕಾರ್ಯಕ್ರಮ ಮಾಡಲಾಯಿತು. 26 ಸಕಲೇಶಪುರ ಬೀಟ್ಸ್ ₹ 55 ಸಾವಿರ ಸಂಭಾವನೆ ನೀಡಲಾಗಿದೆ. ಜನರೇಟರ್ ಸರಿ ಇಲ್ಲದ ಕಾರಣ ಕಲಾವಿದರು ಬಹಳ ಕಷ್ಟ ಪಟ್ಟರು. ಆ ದಿನ ಕಾರ್ಯಕ್ರಮ ತುಂಬಾ ಸಮಯ ನಡೆಯಲಿಲ್ಲ.
ಕೊನೆಯ ದಿನ 27 ರಂದು ಮೈಸೂರಿನ ಸ್ಟಾರ್ ಶಿವು ಇವರಿಂದ ಕಾರ್ಯಕ್ರಮ ₹ 30 ಸಾವಿರ
ಸಂಭಾವನೆ ನೀಡಲಾಗಿದೆ.
ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದ ಗುತ್ತಿಗೆಯನ್ನು ಲೋಕೇಶ್ ರವರು ಪಡೆದಿದ್ದಾರೆ. ನಮ್ಮ ಸಂಘದ ಸದಸ್ಯರು ಕಲಾವಿದರಾದ ಸಿ ಆನಂದರವರು ನಮ್ಮನ್ನು ಸಂಪರ್ಕಿಸಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವಂತೆ ಮಾತನಾಡಿದರು. ನಂತರ ಪುರಸಭೆಯ ಸಿಬ್ಬಂದಿ ರೇವಣ್ಣ ಕಾರ್ಯಕ್ರಮವನ್ನು ಅಯೋಜನೆ ಮಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಉಸ್ತುವಾರಿಯ ಅದ್ಯಕ್ಷರು ಹಾಗೂ ಪುರಸಭಾ ಸದಸ್ಯರೂ ಆದ ಸಮೀರ್ ಹಾಗೂ ಮುಖೇಶ್ ಶೆಟ್ಟಿ ಅವರು ನಿರ್ವಹಿಸಿದ್ದರು. ಪುರಸಭೆ ಸದಸ್ಯ ಪ್ರದೀಪ್ ಎಲ್ಲರಿಗೂ ಹಣ ಪೇಮೆಂಟ್ ಮಾಡಿದರು.
ಇದು ಒಬ್ಬರ ವ್ಯಕ್ತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಉಸ್ತುವಾರಿ ನಡೆಯಲಿಲ್ಲ. ನಾವು ಕಾರ್ಯಕ್ರಮ ನಡೆಸಲು ಹಲವಾರು ಜನರನ್ನು ಸಂಪರ್ಕಿಸ ಬೇಕಾಗಿತ್ತು ಇದು ಬಹಳ ಕಷ್ಟಕರವಾಗಿತ್ತು. ಈ ಭ್ರಷ್ಟಾಚಾರದಲ್ಲಿ ಪುರಸಭೆ ಮುಖ್ಯ ಅಧಿಕಾರಿಗಳು ಸೇರಿದಂತೆ ಕೆಲವು ಸದಸ್ಯರೂ ಕೂಡ ಭಾಗಿಯಾಗಿದ್ದಾರೆ ಎಂದು ವಿವರಿಸಿದರು.
ಕಲಾವಿದರ ಸಂಘದ ಸದಸ್ಯ ಪ್ರಿಯಾಂಕ ಮಾತನಾಡಿ, ಸಕಲೇಶಪುರ ಸ್ವಾಮಿ ಹೆಸರಿನಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಮನರಂಜನ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ಬಹಳ ಉತ್ತಮವಾಗಿ ನಡೆಯಬೇಕು ಎಂಬ ದೃಷ್ಟಿಯಿಂದ ನಾನು ಸಂಬಂದ ಪಟ್ಟವರಿಗೆ ಬೇಟಿಮಾಡಿ ಮೈಸೂರಿನಿಂದ ಕಲಾವಿದರನ್ನು ತಂದು ಉತ್ತಮವಾದ ಕಲಾ ಪ್ರದರ್ಶನ ಮಾಡುವ ಆಸೆ ಹೊಂದಿದ್ದೆ ಆದರೆ ಕಲಾವಿದರನ್ನು ಈ ಮಟ್ಟಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಅವಮಾನಿಸುತ್ತಾರೆ ಎಂದು ತಿಳಿದಿರಲಿಲ್ಲ ಕೊನೆಗೆ ನಾನು ಊಹಿಸಿದಂತೆ ಕಾರ್ಯಕ್ರಮವನ್ನು ನೀಡಿದೆ ಆದರೆ ಇಲ್ಲಿಯವರೆಗೆ ನಿಗದಿತ ಹಣ ನಮಗೆ ನೀಡಿಲ್ಲ ಒಂದು ಹೆಣ್ಣಿಗೆ ಹಾಗೂ ಕಲಾವಿದರಿಗೆ ಈ ರೀತಿಯ ಅನ್ಯಾಯ ಮಾಡುವುದು ಸರಿಯೇ ಇದನ್ನು ಕೇಳುವವರು ಯಾರು ಇಲ್ಲವೆ ಎಂದು ಪ್ರಶ್ನಿಸಿದರು.
ಕಲಾವಿದ ಜೂನಿಯರ್ ಅಪ್ಪು ಮಾತನಾಡಿ, ನಾನು ರಾಜ್ಯಾದ್ಯಂತ ಕಾರ್ಯಕ್ರಮಗಳನ್ನ ನೀಡುತ್ತೇನೆ. ಕಲಾವಿದರನ್ನು ಬಹಳ ಗೌರವದಿಂದ ನಡೆಸಿಸಿಕೊಳ್ಳುತ್ತಾರೆ. ಆದರೆ ಸಕಲೇಶಪುರದ ಪುರಸಭೆ ಮಾತ್ರ ಕಲಾವಿದರನ್ನು ಅತ್ಯಂತ ಹೀನವಾಗಿ ನಡೆಸಿಕೊಂಡಿದೆ. ಅಷ್ಟೇ ಬಹಳ ಕೆಟ್ಟದಾಗಿ ವರ್ತಿಸಿದ್ದಾರೆ. ನಮಗೆ ಕನಿಷ್ಠ ಮೂಲಭೂತ ಸೌಕರ್ಯಗಳು ಇರಲಿಲ್ಲ ಕುಡಿಯುವ ನೀರು ಸಹ ನೀಡಲಿಲ್ಲ ಊಟ ನೀಡಲಿಲ್ಲ ಎಂದು ಆರೋಪಿಸಿದರು.
ಇಲ್ಲಿ ಊಟ ಎನ್ನುವುದು ಪ್ರಮುಖ ಅಂಶವಾಗುತ್ತದೆ. ಅತಿಥಿಗಳ ಸತ್ಕಾರ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಕಲಾವಿದರು ತಮ್ಮ ಕಲಾ ಪ್ರದರ್ಶನ ಮುಗಿಸುವ ವೇಳೆಗೆ ಮಧ್ಯರಾತ್ರಿ ಆಗಿರುತ್ತದೆ ಹೋಟೆಲ್ಗಳು ಮುಚ್ಚಿರುತ್ತವೆ, ಈ ಸಂದರ್ಭದಲ್ಲಿ ಆಹಾರದ ಸಮಸ್ಯೆ ಬಹಳ ಕಾಡುತ್ತದೆ ಎಂದರು.
ಉತ್ತರ ಕರ್ನಾಟಕದಲ್ಲಿ ಕಲಾವಿದರನ್ನು ಬಹಳ ಆತ್ಮೀಯವಾಗಿ ನೋಡಿಕೊಳ್ಳುತ್ತಾರೆ ಅವರನ್ನು ಬೆಳೆಸಲು ಪ್ರೋತ್ಸಾಹಿಸುತ್ತಾರೆ. ಈ ಕಾರಣದಿಂದಲೇ ಇಂದು ಉತ್ತರ ಕರ್ನಾಟಕದಿಂದ ನೂರಾರು ಕಲಾವಿದರನ್ನು ನಾವು ಇಂದು ಕಾಣಬಹುದು. ವಿರುದ್ಧವಾಗಿ ಸಕಲೇಶಪುರದಲ್ಲಿ ಪುರಸಭೆ ಕಲಾವಿದರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಕುಮಾರ್, ಮಾತನಾಡಿ ಕಲಾವಿದರನ್ನು ಈ ರೀತಿಯಾಗಿಯೂ ನಡೆಸಿಕೊಳ್ಳುತ್ತಾರೆ ಎಂಬುದು ಬಹಳ ದುಃಖದ ವಿಷಯ ಸಕಲೇಶಪುರಕ್ಕೆ ಒಂದು ವಿಶೇಷ ಗೌರವವಿದೆ. ಕೆಲವು ಪುರಸಭೆ ಸದಸ್ಯರಿಂದ ಗೌರವಕ್ಕೆ ಧಕ್ಕೆ ಬರುತ್ತಿದೆ. ನಾವು ಜಿಲ್ಲಾಧಿಕಾರಿಗಳಿಗೆ, ಲೋಕಾಯುಕ್ತಕ್ಕೆ ,ನಗರಾಭಿವೃದ್ಧಿಗೆ, ಸರಕಾರಕ್ಕೆ ದೂರು ಸಲ್ಲಿಸುತ್ತೇವೆ. ಇದು ನಮ್ಮ ಆರ್ಥಿಕ ಸಮಸ್ಯೆ ಮಾತ್ರವಲ್ಲ ಸ್ವಾಭಿಮಾನದ ಪ್ರಶ್ನೆಯೂ ಆಗಿದೆ.
ಶಿಕ್ಷೆಯಾಗುವಂತೆ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಯೋಗೇಶ್, ಸದಸ್ಯ ಅಂಜಲಿ ಇದ್ದರು.