

ಸಕಲೇಶಪುರ : ತಾಲ್ಲೂಕಿನ ಯಡಕುಮಾರಿಯಲ್ಲಿ ಕಾಡಾನೆ ದಾಳಿಗೆ ಪ್ಲಂಬರ್ ಒಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಒಂಟಿಸಲಗವೊಂದು ಏಕಾಏಕಿ ದಾಳಿ ಮಾಡಿದ ಪರಿಣಾಮ ಆತನ ಒಂದು ಕಾಲು ಮುರಿದು ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ.
ಯಡಕುಮಾರಿ ಗ್ರಾಮದ ಹರೀಶ್ (49) ಗಾಯಾಳು. ಪ್ಲಂಬರ್ ಕೆಲಸ ಮಾಡುವ ಇವರು, ನಿನ್ನೆ ರಾತ್ರಿ ತಮ್ಮ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ದಾಳಿಗೆ ಒಳಗಾಗಿದ್ದಾರೆ. ಕಾಡಾನೆಯೊಂದು ಹರೀಶ್ ಅವರ ಮೇಲೆ ದಾಳಿ ಮಾಡಿ, ಕಾಲನ್ನು ತುಳಿದಿದೆ .
ಈ ಘಟನೆಯಿಂದ ಆತನ ಒಂದು ಕಾಲು ಮುರಿದಿದ್ದು, ಸ್ಥಳೀಯರು ತಕ್ಷಣ ಆತನನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಹೆತ್ತೂರು ಆಸ್ಪತ್ರೆಗೆ ಕರೆತರಲಾಗಿದ್ದು, ಬಳಿಕ ಮುಂದುವರಿದ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.