
ಸಕಲೇಶಪುರ :ಬೆಂಗಳೂರು -ಮಂಗಳೂರು ಹೆದ್ದಾರಿ ಶಿರಾಡಿ ಘಾಟ್‌ನಲ್ಲಿ ಕುಸಿದಿರುವ ಗುಡ್ಡ, ಮುಗಿಲೆತ್ತರಕ್ಕೆ ಚಿಮ್ಮುವ ಧೂಳು, ಅದರ ನಡುವೆ ವಾಹನ ಚಾಲಕರ ರಸ್ತೆಯ ಹುಡುಕಾಟ, ಅಪೂರ್ಣ ಕಾಮಗಾರಿ ಎಲ್ಲ ಸಮಸ್ಯೆಯನ್ನು ಶಿರಾಡಿ ಹೊದ್ದು ಮಲಗಿದೆ. ಈ ಬಾರಿ ಮುಂಗಾರು ಮಳೆ ಉತ್ತಮವಾಗಿರಲಿದೆ ಎಂಬ ಮುನ್ಸೂಚನೆ ನೀಡಿದೆ. ಈಗಾಗಲೇ ಕೆಲವೆಡೆ ಮಳೆ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಜೋರಾದರೆ ಕಾಮಗಾರಿ ನಿರ್ವಹಣೆ ಇರಲಿ ವಾಹನ ಸಂಚಾರವೂ ಕಷ್ಟಸಾಧ್ಯವಾಗಲಿದೆ.ಸಂಚಾರ ಸಮಸ್ಯೆಯ ಕೂಪವಾಗಿರುವ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಕಾಮಗಾರಿಯು ಸರಕಾರ, ಜಿಲ್ಲಾಡಳಿತ ವಿಧಿಸಿರುವ ಗಡುವಿನ ಒಳಗೆ ಪೂರ್ಣಗೊಳ್ಳುವುದೇ? ಇದಕ್ಕೆ ಉತ್ತರಿಸಬೇಕಾದವರು ಮೌನಕ್ಕೆ ಜಾರಿದ್ದಾರೆಯೇ..?ಹೌದು, ಇಂತಹ ಪ್ರಶ್ನೆ, ಸಂಶಯ ಪ್ರಯಾಣಿಕರನ್ನು ಕಾಡುತ್ತಿದೆ. ಬೆಂಗಳೂರು, ಮಂಗಳೂರು ನಡುವಿನ ಸಂಪರ್ಕ ರಸ್ತೆಯಾದ ಶಿರಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಪ್ರಕೃತಿಯ ಮುನಿಸು, ಅವೈಜ್ಞಾನಿಕ ಕಾಮಗಾರಿ, ವಾಹನ ದಟ್ಟಣೆ ಹೀಗೆ ಹಲವು ಸವಾಲುಗಳ ನಡುವೆ ನಡೆಯುತ್ತಿದ್ದು, ಪ್ರಯಾಣಿಕರು ಬೇಸರದಿಂದಲೇ ಸಂಚರಿಸುತ್ತಿದ್ದಾರೆ.
ದಾರಿ :ಹಾಸನದಿಂದ ಸಕಲೇಶಪುರದವರೆಗೆ ಪ್ರಯಾಣ ಸುಖಕರ, ಅಲ್ಲಿಂದ ಮುಂದೆ ಸಾಗಿ ಆನೆಮಹಲ್ ತಲುಪುತ್ತಲೇ ನರಕದ ಅನುಭವ ನಿಶ್ಚಿತ ಎಂಬಂತಾಗಿದೆ. ಮಂಗಳೂರು, ಧರ್ಮಸ್ಥಳ ಮತ್ತಿತರ ಕಡೆಗೆ ತೆರಳುವ ಪ್ರಯಾಣಿಕರಿಗೆ ಹಾಗೂ ಅಲ್ಲಿಂದ ಸಕಲೇಶಪುರ, ಹಾಸನ ಕಡೆಗೆ ಬರುವವರಿಗೆ ಕಾಡುವ ಪ್ರಶ್ನೆ ದಾರಿ ಯಾವುದಯ್ಯ ಊರು ಸೇರಲು ಎನ್ನುವಂತಾಗಿದೆ. ಅಷ್ಟರಮಟ್ಟಿಗೆ ಶಿರಾಡಿ ರಸ್ತೆ ಹದಗೆಟ್ಟಿದೆ.
ಮಳೆ ಅನಾಹುತ:ಹಿಂದಿನ ವರ್ಷ ಮಳೆಗಾಲ ಸಂದರ್ಭ ಶಿರಾಡಿ ದೊಡ್ಡತಪ್ಪಲೆ ಬಳಿ ಗುಡ್ಡಕುಸಿತದಿಂದ ಪ್ರಕೃತಿ ಮುನಿಸು ತನ್ನ ಪ್ರತಾಪ ತೋರಿತ್ತು. ಅದೃಷ್ಟ ಎಂಬಂತೆ ಸಂಭವನೀಯ ಘೋರ ಅಪಘಾತ ತಪ್ಪಿತ್ತು. ಆ ಭೀಕರತೆ ಮನಗಂಡು ಅವೈಜ್ಞಾನಿಕ ಕಾಮಗಾರಿ ಕಾರಣ ಎಂಬ ಆರೋಪವೂ ಕೇಳಿಬಂದಿತ್ತು. ಗುಡ್ಡಕುಸಿತ ತಡೆಗೆ ಇಳಿಜಾರಿನಂತೆಯೇ ಮೆಷ್ ಅಳವಡಿಸಿ, ಬೋಲ್ಟ್ ನೆಟ್ ಹಾಕಿ ಭದ್ರಗೊಳಿಸುವ ಕಾಮಗಾರಿ ಮಾಡಲಾಯಿತು. ಆ ಮಾರ್ಗದ ವಾಹನ ಸಂಚಾರ ಸ್ಥಗಿತಗೊಳಿಸಿ ಕಾಮಗಾರಿ ಮಾಡಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಗುತ್ತಿಗೆ ಕಂಪನಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಯಿತು.
ಗಡುವು:ಹೆದ್ದಾರಿ ಕಾಮಗಾರಿಯನ್ನು ಜೂನ್ ಅಥವಾ ಜುಲೈ ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಜಿಲ್ಲಾಡಳಿತ ಗಡುವು ನಿಗದಿಪಡಿಸಿದೆ. ಆದರೆ ಸ್ಥಳ ವೀಕ್ಷಣೆ, ವಾಸ್ತವ ಸ್ಥಿತಿ ಅವಲೋಕಿಸಿದರೆ ಮೂರು ತಿಂಗಳಲ್ಲಿ ಪೂರ್ಣಗೊಳ್ಳುವ ಯಾವ ಸಾಧ್ಯತೆಯೂ ಕಾಣದಂತಾಗಿದೆ. ಕುಸಿದಿರುವ ಗುಡ್ಡ, ಮುಗಿಲೆತ್ತರಕ್ಕೆ ಚಿಮ್ಮುವ ಧೂಳು, ಅದರ ನಡುವೆ ವಾಹನ ಚಾಲಕರ ರಸ್ತೆಯ ಹುಡುಕಾಟ, ಅಪೂರ್ಣ ಕಾಮಗಾರಿ ಎಲ್ಲ ಸಮಸ್ಯೆಯನ್ನು ಶಿರಾಡಿ ಹೊದ್ದು ಮಲಗಿದೆ. ಈ ಬಾರಿ ಮುಂಗಾರು ಮಳೆ ಉತ್ತಮವಾಗಿರಲಿದೆ ಎಂಬ ಮುನ್ಸೂಚನೆ ನೀಡಿದೆ. ಈಗಾಗಲೇ ಕೆಲವೆಡೆ ಮಳೆ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಜೋರಾದರೆ ಕಾಮಗಾರಿ ನಿರ್ವಹಣೆ ಇರಲಿ ವಾಹನ ಸಂಚಾರವೂ ಕಷ್ಟಸಾಧ್ಯವಾಗಲಿದೆ.
ಪರಿಹಾರವೇನು?:ಮಳೆಗಾಲದಲ್ಲಿ ಸಂಭವನೀಯ ಅನಾಹುತ ತಡೆಯಬೇಕು, ಶಿರಾಡಿ ಸಂಚಾರ ಸ್ಥಗಿತವಾಗಬಾರದು ಎಂದು ನಿರ್ಧರಿಸಿದ್ದರೆ, ಸಕಲ ಸಿದ್ಧತೆಯೊಂದಿಗೆ ಇಂದಿನಿಂದಲೇ ಯುದ್ಧೋಪಾದಿಯಲ್ಲಿ ಕಾಮಗಾರಿ ನಿರ್ವಹಿಸಬೇಕು. ಇದರ ಹೊರತಾಗಿ ಸಮಸ್ಯೆಗೆ ಮುಕ್ತಿ ಇಲ್ಲಎಂಬುದು ಜನತೆಯ ಅಭಿಪ್ರಾಯವಾಗಿದೆ.ಶಿರಾಡಿ ಮಾರ್ಗದ ಕಾಮಗಾರಿ ಖುದ್ದು ವೀಕ್ಷಣೆ ಮಾಡಿ ಗಡುವು ನೀಡಿದ್ದೇನೆ. ಮಳೆಗಾಲದಲ್ಲಿಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದಿದ್ದಾರೆ ಸತ್ಯಭಾಮ, ಜಿಲ್ಲಾಧಿಕಾರಿ.