
ಸಕಲೇಶಪುರ: ಹಾಸನದ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋಗಿ ಆಯತಪ್ಪಿ ಬಿದ್ದು ಮಹಿಳೆಯ ಎರಡೂ ಕಾಲುಗಳು ಮುರಿದಿರುವ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ಗಾಯಗೊಂಡಿರುವ ಮಹಿಳೆ ಸಕಲೇಶಪುರ ಮೂಲದವರು ಎಂದು ತಿಳಿದು ಬಂದಿದೆ. ಮೈಸೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ರೈಲು, ಹಾಸನ ನಿಲ್ದಾಣಕ್ಕೆ ಬಂದಾಗ ಈ ಅವಘಡ ಸಂಭವಿಸಿದೆ. ಮಹಿಳೆ ಸಕಲೇಶಪುರಕ್ಕೆ ತೆರಳಲು ಹಾಸನದ ರೈಲು ನಿಲ್ದಾಣದಲ್ಲಿ ಚಲಿಸುತ್ತಿರುವಾಗಲೇ ರೈಲು ಹತ್ತಲು ಮುಂದಾದರು ಎನ್ನಲಾಗಿದೆ. ಆದರೆ ಆಯತಪ್ಪಿ ಬಿದ್ದು, ಚಕ್ರ ಅವರ ಕಾಲ ಮೇಲೇ ಹರಿದಿದೆ.ಈ ವೇಳೆ ಅಲ್ಲೇ ಕೆಲಸ ಮಾಡುತ್ತಿದ್ದ ಹೋಂ ಗಾರ್ಡ್ ಜಯಂತಿ ಎಂಬುವವರು ರೈಲನ್ನು ನಿಲ್ಲಿಸಿ ಬಳಿಕ ರೈಲಿನ ಅಡಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಬಳಿಕ ಗಂಭೀರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆ ಸ್ಥಿತಿ ಚಿಂತಾಜನಕವಾಗಿದೆ.