
ಸಕಲೇಶಪುರ: ಶಿರಾಡಿ ಘಾಟ್ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂಬ ವಿಚಾರ ಇದೀಗ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣ ಕಳೆದ 9 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ. ಇನ್ನೇನು ಮಳೆಗಾಲ ಸಮೀಪಿಸುತ್ತಿದ್ದು, ಅಷ್ಟರಲ್ಲಿ ಕಾಮಗಾರಿ ಮುಗಿಯದಿದ್ದರೆ ಈ ಬಾರಿಯೂ ವಾಹನ ಸಂಚಾರ ಅಸ್ತವ್ಯಸ್ತವಾಗುವುದು ಖಚಿತವಾಗಿದೆ. ಆದ್ದರಿಂದ ಕಾಮಗಾರಿ ಬೇಗ ಮುಗಿಸುವಂತೆ ಈ ಭಾಗದ ಜನರು ಆಗ್ರಹಿಸಿದ್ದಾರೆ.ಹಾಸನ ಮಾರ್ಗವಾಗಿ ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾದ ಎನ್‌ಹೆಚ್ 75ರ ಶಿರಡಿ ಘಾಟ್ ರಸ್ತೆ ಕಾಮಗಾರಿ ಆರಂಭಗೊಂಡು ಬರೋಬ್ಬರಿ 9 ವರ್ಷಗಳು ಕಳೆದಿವೆ. ಆದರೆ ಇದುವರೆಗೂ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ.ಕಳೆದ ಎರಡು ತಿಂಗಳ ಹಿಂದೆ ಜಿಲ್ಲಾಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರದಲ್ಲಿ ರಸ್ತೆ ಕಾಮಗಾರಿ ಮುಗಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಗಡುವು ನೀಡಿದ್ದರು. ಆದರೆ ಏಪ್ರಿಲ್ ತಿಂಗಳು ಮುಗಿಯುತ್ತಾ ಬಂದಿದ್ದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.