
ಸಕಲೇಶಪುರ: ಪಟ್ಟಣದ ಗ್ರಾಮ ದೇವತೆ ಕೊಪ್ಪಲು ಮಾರಮ್ಮ ಅವರ ಸುಗ್ಗಿ ಹಾಗೂ ಕೊಂಡೋತ್ಸವ ವಿಜೃಂಭಣೆಯಿಂದ ಅದ್ದೂರಿಯಾಗಿ ಜರುಗಿತು.ಪಟ್ಟಣದ ಮಹೇಶ್ವರಿನಗರದಲ್ಲಿರುವ ಗ್ರಾಮದ ಆದಿ ದೇವತೆ ಕೊಪ್ಪಲು ಮಾರಮ್ಮ ಅವರು ಸುಗ್ಗಿ ಜಾತ್ರೆ ಕಳೆದ 5 ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಗಳ ಮೂಲಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು. ಕಳೆದ ಮಂಗಳವಾರ ಗ್ರಾಮ ದೇವತೆ ಮಾರಮ್ಮ ಅವರಿಗೆ ದೇವತಾ ಪ್ರಾರ್ಥನೆಯೊಂದಿಗೆ ವಿಶೇಷ ಪಂಚಾಮೃತ ಅಭಿಷೇಕ ನಡೆಸಿ ಹೇಮಾವತಿ ನದಿಯಿಂದ ಗಂಗೆ ತರುವುದರ ಮೂಲಕ ಸುಗ್ಗಿ ಜಾತ್ರೆ ಆರಂಭವಾಯಿತು. ಬುಧವಾರ ಅಮ್ಮನವರಿಗೆ ವಿಶೇಷ ದುರ್ಗಾ ಹೋಮ ನೆರವೇರಿಸಲಾಯಿತು ಶುಕ್ರವಾರ ಅಮ್ಮನವರನ್ನು ಮಹೇಶ್ವರಿ ನಗರ ಹಳೆಸಂತೆವೆರಿ ಬಡಾವಣೆಯಲ್ಲಿ ಊರಾಡಿಸಿ ದೇವಿಗೆ ಭಕ್ತರಿಂದ ಪೂಜೆ ನೆರವೇರಿಸಲಾಯಿತು.

ರಾತ್ರಿ ವಿದ್ಯುತ್ ಅಲಂಕಾರದಲ್ಲಿ ಅಮ್ಮನವರನ್ನು ಪಟ್ಟಣದ ರಾಜಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಶುಕ್ರವಾರ ರಾತ್ರಿ ಸುಗ್ಗಿ ಕುಣಿತವಾದ ನಂತರ ಶನಿವಾರ ಬೆಳಗ್ಗಿನ ಜಾವದಲ್ಲಿ ಕೊಂಡೋತ್ಸವ ನಡೆಸಲಾಯಿತು. ನೂರಾರು ಭಕ್ತರು ಕೆಂಡದಲ್ಲಿ ನಡೆದು ತಮ್ಮ ಹರಕೆ ಹಾಗೂ ಇಷ್ಟ ಭಕ್ತಿಯನ್ನು ನೇರವೆರಿಸಿದರು. ಪ್ರತಿದಿನ ಭಕ್ತರಿಗೆ ಅನ್ನದಾನ ಪ್ರಸಾದ ವಿತರಿಸಲಾಯಿತುಶನಿವಾರ ರಾತ್ರಿ ದೇವತೆಯ ಬಂಟರಾದ ಬೂತರಾಯ, ಕೆಂಚರಾಯ, ಕರಿರಾಯರಿಗೆ ಕೋಳಿ ಹಾಗೂ ಕುರಿಯನ್ನು ದೂಳ್‌ಮರಿ ಹರಕೆಯನ್ನು ಒಪ್ಪಿಸಿಲಾಯಿತು. ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿಯಿಂದ ಅಚ್ಚುಕಟ್ಟಾಗಿ ಈ ಎಲ್ಲಾ ಧಾರ್ಮಿಕ ಸುಗ್ಗಿ ಕೆಂಡೊತ್ಸವ ಕಾರ್ಯಕ್ರಮ ನೇರವೆರಿಸಲಾಯಿತು.